ಬಿಡಿಎಗೆ ರೇರಾ ಕಾಯ್ದೆ ಅನ್ವಯ: ಹೈಕೋರ್ಟ್ ತಡೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವ್ಯಾಪ್ತಿಯಲ್ಲಿ 2016ಕ್ಕೂ ಮೊದಲು ರೂಪುಗೊಂಡಿರುವ ವಸತಿ ವಿನ್ಯಾಸಗಳು ಮತ್ತು ಯೋಜನೆಗಳಿಗೆ; ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ–2016 (ರೇರಾ) ಅನ್ನು ಅನ್ವಯಿಸಿ ಕಾರ್ಯಾಚರಣೆ ನಡೆಸುವುದಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಬಿಡಿಎಗೆ ರೇರಾ ಕಾಯ್ದೆ ಅನ್ವಯಿಸಿ, ರೇರಾ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬಿಡಿಎ ವಕೀಲರಾದ ಬಿ.ವಚನ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಬಿಡಿಎ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಕೆ.ಶಶಿಕಿರಣ ಶೆಟ್ಟಿ ಅವರು, ‘ಬಿಡಿಎ ಎಂಬುದು ಒಂದು ಸ್ವತಂತ್ರ ಮತ್ತು ಶಾಸನಬದ್ಧ ಸಂಸ್ಥೆಯಾಗಿದ್ದು, ಬಿಡಿಎ–1976ರ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತಿದೆ. ವಿಶೇಷತಃ ಇದು ಬೆಂಗಳೂರು ನಗರದ ಅಭಿವೃದ್ಧಿಗೆ ಯೋಜನೆ ರೂಪಿಸುವ ಜವಾಬ್ದಾರಿಗಳನ್ನು ಕಾಲಕಾಲಕ್ಕೆ ನಿಭಾಯಿಸುತ್ತದೆ. ಆದರೆ, ನಿವಾಸಿಗಳ ಲೇ ಔಟ್ ಅಥವಾ ಯೋಜನೆಗಳಿಗೆ ಅನ್ವಯವಾಗುವಂತೆ ರೂಪಿಸಲಾಗಿರುವ; ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ–2016 ಅನ್ನು ಬಿಡಿಎಗೂ ಅನ್ವಯಿಸಲು ಅವಕಾಶ ನೀಡುವುದು ತರವಲ್ಲ. ಈ ಮೂಲಕ ಬಿಡಿಎ ಕಾರ್ಯನಿರ್ವಹಣೆಯ ಮೇಲೆ ನಿಯಂತ್ರಣ ಹೊಂದುವ ಅಥವಾ ಮೇಲ್ವಿಚಾರಣೆ ನಡೆಸುವ ಪ್ರಯತ್ನ ಬಿಡಿಎಗೆ ಅನಪೇಕ್ಷಿತ ಹಾನಿ ಉಂಟು ಮಾಡುತ್ತದೆ’ ಎಂದರು. ‘ಸರ್ಕಾರ ರೈತರಿಂದ ಭೂಸ್ವಾಧೀನಕ್ಕೆ ಪಡೆದು ನಂತರ ಅದನ್ನು ಬಿಡಿಎಗೆ ನೀಡುತ್ತದೆ. ಬಿಡಿಎ ಅಂತಹ ಜಮೀನುಗಳಲ್ಲಿ ಯೋಜನಾಬದ್ಧ ವಸತಿ ನಿವೇಶನಗಳನ್ನು ರೂಪಿಸಿ ಹಂಚಿಕೆ ಮಾಡುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಸರ್ಕಾರ ರೈತರಿಂದ ಜಮೀನನ್ನು ಸ್ವಾಧೀನಕ್ಕೆ ಪಡೆಯುವಾಗ ರೈತರು ತಮ್ಮ ಹಕ್ಕುಗಳನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗುವುದುಂಟು ಅಥವಾ ಪರಿಹಾರ ಸಾಲದು ಎಂಬ ಆಕ್ಷೇಪ ಎತ್ತುವುದುಂಟು. ಹಾಗಾಗಿ, ಸರ್ಕಾರ ಎಷ್ಟು ಪ್ರಮಾಣದ ಜಮೀನನ್ನು ಕಾನೂನುಬದ್ಧವಾಗಿ ವಶಪಡಿಸಿಕೊಂಡಿರುತ್ತದೆಯೋ ಅಷ್ಟೇ ಜಮೀನಿನಲ್ಲಿ ಬಿಡಿಎ ಹಂತಹಂತವಾಗಿ ನಿವೇಶನ ರೂಪಿಸಿ ಅರ್ಹರಿಗೆ ಹಂಚುತ್ತಾ ಹೋಗುತ್ತದೆ. ಹೀಗಾಗಿ, ಯೋಜಿತ ನಿವೇಶನಗಳು ಒಮ್ಮೆಗೇ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಹೊಂದುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಉಂಟಾಗುವ ಎಲ್ಲ ತಕರಾರುಗಳಿಗೆ ರೇರಾ ಕಾಯ್ದೆಯನ್ನು ಅನ್ವಯಗೊಳಿಸುತ್ತಾ ಹೋಗುವುದು ಸಮರ್ಥನೀಯವಲ್ಲ’ ಎಂದು ಪ್ರತಿಪಾದಿಸಿದರು.