ಇಂದು ಡಿಕೆಶಿ ಪ್ರಮಾಣ: ಪಾದಯಾತ್ರೆ ಮೂಲಕ ವರ್ಚಸ್ಸು ಹೆಚ್ಚಿಸಿಕೊಂಡು CM ಆದ ನಾಯಕರು
ದೇಶದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆಗಳ ಪರಂಪರೆ ದೊಡ್ಡದು. ಜನಪ್ರತಿನಿಧಿಗಳು ತಾವು ಸಾಮಾನ್ಯರ ಪ್ರತಿನಿಧಿಗಳೆಂದು ಗುರುತಿಸಿಕೊಳ್ಳಲು, ಸಾರ್ವಜನಿಕರಿಗೆ ಹತ್ತಿರವಾಗಲು ಪಾದಯಾತ್ರೆಗೆ ಪರ್ಯಾಯ ಮತ್ತೊಂದಿಲ್ಲ. ಜನಾಭಿಪ್ರಾಯವನ್ನು ಒಟ್ಟುಗೂಡಿಸಲು, ಬೆಂಬಲವನ್ನು ಗಿಟ್ಟಿಸಿಕೊಳ್ಳಲು ಹಲವು ನಾಯಕರು ಪಾದಯಾತ್ರೆಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಸಾಕಷ್ಟು ಮಂದಿ ಯಾತ್ರೆ–ಪಾದಯಾತ್ರೆಗಳ ನಂತರ ಅಧಿಕಾರಕ್ಕೇರಿದ ಉದಾಹರಣೆಗಳು ನಮ್ಮ ಮುಂದಿವೆ. ಕರ್ನಾಟದದಲ್ಲಿ ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಯಾತ್ರೆಗಳ ಮೂಲಕವೇ ಅಪಾರ ಜನಪ್ರಿಯತೆ ಗಳಿಸಿದ್ದರು. ಅದರ ಫಲ ಏನು, ಎಷ್ಟು ಎಂಬುದನ್ನು ಚುನಾವಣಾ ಫಲಿತಾಂಶಗಳೇ ಹೇಳಿದ್ದವು. ಇಂದು (ಜೂನ್ 03ರಂದು) ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರೂ 2022ರ ‘ಮೇಕೆದಾಟು ಪಾದಯಾತ್ರೆ’ ಮೂಲಕ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು. ಈ ಹೊತ್ತಿನಲ್ಲಿ ಸಿಎಂ ಗಾದಿಗೇರುವ ಮುನ್ನ ಪ್ರಮುಖ ವಿಚಾರಗಳತ್ತ ಜನರನ್ನು ಸೆಳೆಯಲು ಪಾದಯಾತ್ರೆ ನಡೆಸಿದ ಪ್ರಮುಖ ನಾಯಕರ ಬಗ್ಗೆ ತಿಳಿಯೋಣ..
ಎಸ್.ಎಂ. ಕೃಷ್ಣರ ‘ಪಾಂಚಜನ್ಯ’ 1999ರ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣರ ‘ಪಾಂಚಜನ್ಯ’ ಯಾತ್ರೆ ರಾಜ್ಯದಾದ್ಯಂತ ಮನೆಮಾತಾಗಿತ್ತು. ಜೊತೆಗೆ ಕೃಷ್ಣರ ಗ್ರಾಫ್ ಏರಿಸಿತ್ತು. ಪಕ್ಷ ಸಂಘಟನೆ ಸಲುವಾಗಿ ಕೈಗೊಂಡ ಈ ಯಾತ್ರೆಯ ಯಶಸ್ಸು ಜೆಡಿಯು – ಬಿಜೆಪಿಯನ್ನು ಬದಿಗೆ ಸರಿಸಿತ್ತು. ಪಕ್ಷದ ನಾಯಕರೆಲ್ಲ ಒಂದೇ ಬಸ್ಸಿನಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಸುತ್ತಾಡಿದ ಪರಿಣಾಮ, 99ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆತಿತ್ತು. ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ವೈ.ಎಸ್.ರಾಜಶೇಖರ ರೆಡ್ಡಿಯ ‘ಪ್ರಜಾ ಪ್ರಶಾಂತಂ’ ವೈ.ಎಸ್.ಆರ್ ಎಂದೇ ಖ್ಯಾತರಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ಅವರು 2003ರಲ್ಲಿ ಅವಿಭಜಿತ ಆಂಧ್ರ ಪ್ರದೇಶದಲ್ಲಿ ‘ಪ್ರಜಾ ಪ್ರಶಾಂತಂ’ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ್ದರು. ಇದು 11 ಜಿಲ್ಲೆಗಳಲ್ಲಿ ಸುಮಾರು 1,1475 ಕಿ.ಮೀ. ವರೆಗೂ ಸಾಗಿತ್ತು. ಆಗಲೂ ಎನ್. ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದರು.
ವಿರೋಧ ಪಕ್ಷದ ನಾಯಕರಾಗಿದ್ದ ರೆಡ್ಡಿ ಅವರು, ರಾಜ್ಯ ಗ್ರಾಮೀಣ ಪ್ರದೇಶದಲ್ಲಿ ಬರ ತಂದಿಟ್ಟಿದ್ದ ಸಂಕಷ್ಟಗಳು, ರೈತರ ಸಮಸ್ಯೆ, ಆತ್ಮಹತ್ಯೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿತ್ತು. 294 ಸದಸ್ಯ ಬಲದ ವಿಧಾನಸಭಾ ಚುನಾವಣೆಯಲ್ಲಿ ‘ಕೈ’ 185 ಕಡೆ ಜಯ ಗಳಿಸಿತ್ತು. ವೈ.ಎಸ್.ಆರ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು. ಸಿದ್ದರಾಮಯ್ಯರ ‘ಬಳ್ಳಾರಿ ಚಲೋ’ 2010ರಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಂಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ‘ಬಳ್ಳಾರಿ ಚಲೋ’ ಹೆಸರಿನಲ್ಲಿ ಈ ಯಾತ್ರೆಯು ಬೆಂಗಳೂರಿನಿಂದ ಬಳ್ಳಾರಿವರೆಗೆ 320 ಕಿ.ಮೀ.ವರೆಗೆ 15 ದಿನ ಸಾಗಿತ್ತು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ವಿಚಾರದ ಬಗ್ಗೆ ಸಿದ್ದರಾಮಯ್ಯ ಗುಡುಗಿದ್ದರು. ಈ ಯಾತ್ರೆ ಸರ್ಕಾರದ ಬೆವರಿಳಿಸಿದ್ದಷ್ಟೇ ಅಲ್ಲದೆ, ಕಾಂಗ್ರೆಸ್‌ನಲ್ಲೂ ಒಗ್ಗಟ್ಟು ಮೂಡಿಸಿತ್ತು.