ಆದಿವಾಸಿಗಳ 'ಜಲ, ಜಂಗಲ್, ಜಮೀನು' ಲೂಟಿಗೆ ಬಿಜೆಪಿ-ಆರ್‌ಎಸ್‌ಎಸ್ ಸಂಚು: ರಾಹುಲ್ ಗಾಂಧಿ ಆರೋಪ!
ನವದೆಹಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳು ಜನವಿರೋಧಿ ಹಾಗೂ ಆದಿವಾಸಿ ವಿರೋಧಿ ಮನಸ್ಥಿತಿಯನ್ನು ಹೊಂದಿವೆ. ಆದಿವಾಸಿಗಳನ್ನು 'ವನವಾಸಿಗಳು' ಎಂದು ಕರೆಯುವ ಮೂಲಕ ಅವರ ಮೂಲಭೂತ ಹಕ್ಕುಗಳಾದ ಜಲ, ಜಂಗಲ್ ಮತ್ತು ಜಮೀನು (ನೀರು, ಅರಣ್ಯ ಮತ್ತು ಭೂಮಿ) ಹಕ್ಕುಗಳನ್ನು ಕಸಿದುಕೊಳ್ಳಲು ಅವು ಸಂಚು ರೂಪಿಸುತ್ತಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯ ಇಂದಿರಾ ಭವನದಲ್ಲಿ ಆದಿವಾಸಿ ಕಾಂಗ್ರೆಸ್ ಆಯೋಜಿಸಿದ್ದ 'ಆದಿವಾಸಿ ಪ್ರೊಫೆಷನಲ್ಸ್ ಕಾನ್‌ಕ್ಲೇವ್ 2026’ (Adivasi Professionals Conclave 2026) ' ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ರಾಹುಲ್ ಗಾಂಧಿ, ಬಳಿಕ ಆದಿವಾಸಿಗಳ ಹಕ್ಕುಗಳು ಮತ್ತು ಅವರು ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಆದಿವಾಸಿ ಕಾಂಗ್ರೆಸ್ ಅಧ್ಯಕ್ಷ ವಿಕ್ರಾಂತ್ ಭುರಿಯಾ ಅವರು ರಾಹುಲ್ ಗಾಂಧಿ ಅವರಿಗೆ ಸಾಂಪ್ರದಾಯಿಕ ಆದಿವಾಸಿ ಹ್ಯಾಟ್ (ಶಿರಸ್ತ್ರಾಣ) ತೊಡಿಸಿ ಗೌರವಿಸಿದರು. ಹಿಂದಿ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡ ರಾಹುಲ್ ಗಾಂಧಿ, "ಆದಿವಾಸಿಗಳು ಈ ಭಾರತ ದೇಶದ ಮೂಲ ಸಂರಕ್ಷಕರು ಮತ್ತು ನಿಜವಾದ ಮಾಲೀಕರು. ಭಾರತದ ಐತಿಹಾಸಿಕ ಪ್ರಜ್ಞೆ, ಸಂಸ್ಕೃತಿ ಮತ್ತು ಬುದ್ಧಿವಂತಿಕೆ ಅಡಗಿರುವುದೇ ಅವರಲ್ಲಿ. ಇದುವೇ ಪರಮ ಸತ್ಯ" ಎಂದು ಬಣ್ಣಿಸಿದ್ದಾರೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಆದಿವಾಸಿ ವಿರೋಧಿ ಮನಸ್ಥಿತಿಯು ನಿಮ್ಮನ್ನು ಕೇವಲ 'ವನವಾಸಿಗಳು' ಎಂದು ಸೀಮಿತಗೊಳಿಸಲು ಯತ್ನಿಸುತ್ತಿದೆ. ನಿಮ್ಮ ಸಾಂಪ್ರದಾಯಿಕ ಹಕ್ಕುಗಳಾದ ನೀರು, ಕಾಡು ಮತ್ತು ಭೂಮಿಯಿಂದ ನಿಮ್ಮನ್ನು ವಂಚಿತಗೊಳಿಸುವುದು ಅವರ ಆಲೋಚನೆಯಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಮತ್ತು ನಾನು ನಿಮ್ಮ ಹಕ್ಕುಗಳನ್ನು ಗೌರವಿಸುತ್ತೇವೆ. ಅವುಗಳ ರಕ್ಷಣೆಗಾಗಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ