Tragic: ಖ್ಯಾತ ನಟನ ಚಿತ್ರೀಕರಣ ಸೆಟ್‌ನಲ್ಲಿ ಭೀಕರ ಸ್ಪೋಟ: 26ರ ಯುವಕ ಸಾವು
ಚೆನ್ನೈ: ಚಲನಚಿತ್ರ ಚಿತ್ರೀಕರಣದ ಸೆಟ್‌ನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಚಿತ್ರತಂಡದ ಯುವ ಸದಸ್ಯರೊಬ್ಬರು ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಸಂಭವಿಸಿದೆ. ಖ್ಯಾತ ನಟ ಹಾಗೂ ನಿರ್ದೇಶಕ ಎಸ್‌ಜೆ ಸೂರ್ಯ (SJ Suryah) ಅವರ ಮುಂಬರುವ ಚಿತ್ರ 'ಕಿಲ್ಲರ್' (Killer Movie) ಶೂಟಿಂಗ್ ಸೆಟ್‌ನಲ್ಲಿ ಈ ದುರಂತ ನಡೆದಿದೆ. ಬುಧವಾರ (ಜೂ.3) ಮುಂಜಾನೆ ಪೆರಂಬೂರ್‌ನ ಬಿನ್ನಿ ಮಿಲ್ಸ್‌ನಲ್ಲಿ ಬಾಂ*ಬ್ ಬ್ಲಾಸ್ಟ್ ದೃಶ್ಯದ ಚಿತ್ರೀಕರಣದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ʼಇಂಡಿಯಾ ಟುಡೇʼ ವರದಿಯ ಪ್ರಕಾರ, ಬುಧವಾರ ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಚಿತ್ರತಂಡವು ನಿಯಂತ್ರಿತ ಸ್ಫೋಟದ (Controlled Blast) ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿತ್ತು. ಈ ವೇಳೆ ದೃಶ್ಯಕ್ಕಾಗಿ ಬಳಸಲಾಗುತ್ತಿದ್ದ ಗ್ಯಾಸ್ ಸಿಲಿಂಡರ್ ಒಂದು ಹಠಾತ್ ಆಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸೆಟ್‌ನಲ್ಲಿದ್ದ ಮಧನ್ (26) ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.