Select Location
All Locations
State
Region
City / District
ಬಸವಕಲ್ಯಾಣ | ಸಿದ್ಧತೆ ಅಂತಿಮ, ಸೋಯಾ ಅವರೆಗೆ ಹೆಚ್ಚಿನ ಬೇಡಿಕೆ

ಬಸವಕಲ್ಯಾಣ | ಸಿದ್ಧತೆ ಅಂತಿಮ, ಸೋಯಾ ಅವರೆಗೆ ಹೆಚ್ಚಿನ ಬೇಡಿಕೆ

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಗೆ ಕೈಗೊಳ್ಳುವ ಸಿದ್ಧತೆ ಅಂತಿಮಗೊಂಡಿದ್ದು ಮೃಗಶಿರಾ ಮಳೆ ಬರುವುದೇ ತಡ ಜಮೀನಿನಲ್ಲಿ ಬೀಜ ಚೆಲ್ಲಬೇಕು ಎಂಬ ಧಾವಂತದಲ್ಲಿ ರೈತಾಪಿ ವರ್ಗ ಇದ್ದಂತಿದೆ. ಸೋಯಾ ಅವರೆ ಬೀಜಕ್ಕೆ ಅಧಿಕ ಬೇಡಿಕೆಯಿದೆ. ಈ ಸಲ ಅಧಿಕಮಾಸ (ಧೊಂಡ್ಯಾ ತಿಂಗಳು) ಬಂದಿದೆ. ಹೀಗಾಗಿ ಈ ತಿಂಗಳಲ್ಲಿ ಕೌಟುಂಬಿಕ ಕಾರ್ಯಕ್ರಮ ನಡೆಸಬಾರದು ಎಂಬ ಸಂಪ್ರದಾಯವಿದೆ. ಹೀಗಾಗಿ ಕಳೆದ ಹದಿನೈದು ದಿನಗಳಿಂದ ಮದುವೆ ಇತ್ಯಾದಿ ಯಾವುದೇ ಕಾರ್ಯಕ್ರಮಗಳು ಇದ್ದಿರಲಿಲ್ಲವಾದ್ದರಿಂದ ರೈತರೆಲ್ಲ ಕೃಷಿ ಚಟುವಟಿಕೆಗಳ ಕಡೆಯೇ ಲಕ್ಷ್ಯ ಕೇಂದ್ರೀಕರಿಸಿದ್ದರು. ನೇಗಿಲು, ಕುಂಟೆ ಹೊಡೆದು ಜಮೀನು ಹದಮಾಡಿದ್ದಾರೆ. ಕಸಕಡ್ಡಿ ಆಯ್ದು ತೆಗೆಯಲಾಗಿದೆ. ತಿಪ್ಪೆಗೊಬ್ಬರ ಹೊಲದಲ್ಲಿ ಹರಡಿ ಬಿತ್ತನೆ ಪೂರ್ವದ ಕೃಷಿ ಚಟುವಟಿಕೆಗಳನ್ನು ಮುಗಿಸಲಾಗಿದೆ.

ತಾಲ್ಲೂಕಿನ ಸರಹದ್ದಿನಲ್ಲಿರುವ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯ ಮತ್ತು ಬೆಣ್ಣೆತೊರೆ ನದಿಯ ಬ್ಯಾರೇಜ್‌ಗಳಿಂದ ಕೆಲ ಊರುಗಳಿಗೆ ಮಾತ್ರ ಅನುಕೂಲ ಆಗಿದ್ದು ಉಳಿದೆಡೆ ಮಳೆ ಆಧಾರಿತ ಕೃಷಿಯನ್ನೇ ರೈತರು ಅವಲಂಬಿಸಿದ್ದಾರೆ. ತೊಗರಿಯ ನಾಡು ಕಲಬುರ್ಗಿಯ ಪಕ್ಕದ ಈ ತಾಲ್ಲೂಕಿನಲ್ಲೂ ಮೊದಲು ತೊಗರಿ ಬೆಳೆಯುವ ವಾಡಿಕೆಯಿತ್ತು. ಕೆಲ ವರ್ಷಗಳಿಂದ ಸೋಯಾ ಅವರೆ ಬಿತ್ತನೆ ಕ್ಷೇತ್ರ ಅಧಿಕವಾಗಿದೆ. ಎಣ್ಣೆಕಾಳು ಬೆಳೆಯುವ ಕ್ಷೇತ್ರ 46815 ಹೆಕ್ಟೇರ್ ಗಳಷ್ಟಿದ್ದು ಅದರಲ್ಲಿ ಸೋಯಾ ಅವರೆ ಬಿತ್ತನೆ ಕ್ಷೇತ್ರವೇ 46500 ಹೆಕ್ಟೇರ್ ನಷ್ಟಿದೆ. ಬೇಸಿಗೆಯ ಬಿಸಿಲು ಎಂದಿಲ್ಲದಂತೆ ಪ್ರಖರವಾಗಿತ್ತು. ಆದರೂ, ಹಿಂದಿನ ವರ್ಷ ಮಳೆ ಅಧಿಕ ಪ್ರಮಾಣದಲ್ಲಿ ಸುರಿದಿದ್ದರಿಂದ ನೀರಿನ ಅಭಾವ ಕಾಡಲಿಲ್ಲ. ಚುಳಕಿನಾಲಾ ಜಲಾಶಯ ಹಾಗೂ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಖೇರ್ಡಾ (ಬಿ) ಜಲಾಶಯ, ತ್ರಿಪುರಾಂತ ಕೆರೆ, ಬೆಟಬಾಲ್ಕುಂದಾ ಕೆರೆ, ಮೋರಖಂಡಿ ಮತ್ತು ತಳಭೋಗ ಕೆರೆಗಳಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚಿನ ನೀರಿನ ಸಂಗ್ರಹವಿದೆ. ಬಾವಿ, ಕೊಳವೆ ಬಾವಿಗಳು ಸಹ ಬತ್ತಿಲ್ಲ. ಹೀಗಾಗಿ ಅಲ್ಪಸ್ವಲ್ಪ ಮಳೆ ಸುರಿದರೂ ಬಿತ್ತನೆ ಕೈಗೊಂಡು ಮುಂದೆ ಮಳೆ ಕೆಲಕಾಲ ಕೈಕೊಟ್ಟರೂ ಬಾವಿಗಳ ನೀರು ಉಪಯೋಗಿಸಬಹುದು ಎಂಬ ಯೋಚನೆ ಇದೆ ಎಂದು ಅನೇಕ ಕೃಷಿಕರು ಹೇಳಿದ್ದಾರೆ.

Source : Prajavani

1 hour ago

Home Flash News